ಕೆ.ಎಸ್.ನರಸಿಂಹಸ್ವಾಮಿ ಹುಟ್ಟುವ ಮೊದಲು, ನಮ್ಮೊಡನೆ ಇದ್ದಾಗ, ನಮ್ಮನ್ನು ತೊರೆದು ಹೋದ ಮೇಲೂ ಪ್ರೇಮ ಎಂಬ ಭಾವನೆ, ಅನುಭೂತಿ ಮತ್ತು ಮಲ್ಲಿಗೆ ಎಂಬ ಹೂವು ಇದ್ದವು, ಇವೆ ಮತ್ತು ಇರುತ್ತವೆ. ಆದರೆ ಈ ಕವಿ ಇವೆರಡನ್ನೂ ಸಹ ಕನ್ನಡದ ವರ್ಣಮಾಲೆಯೆಂಬಂತೆ, ವ್ಯಾಕರಣದ ನಿಯಮದಂತೆ ಹಾಗೂ ವಿವರಿಸಲಾಗದ ತುಡಿತವೆಂಬಂತೆ ಬಳಸಿಕೊಂಡದ್ದು ಮಾತ್ರ ಸೋಜಿಗ. ಎಷ್ಟು ಬಾರಿ ಇವರ ಕವನಗಳಲ್ಲಿ ಇವುಗಳು ಬಂದಿವೆಯೋ, ಆದರೆ ಒಂದು ಬಾರಿ ಸಹ ಇದನ್ನು ಕ್ಲಿಷೆ ಎಂದು ಸಹೃದಯರು ಬಗೆದಿಲ್ಲ ಎಂದರೆ ಇವೆರಡರ ಕುರಿತಾಗಿ ಅವರಿಗೆ ಇದ್ದ ಕಲ್ಪನೆ ಯಾವ ಪರಿಯಾಗಿರಬಹುದು ನೀವೇ ಊಹಿಸಿ.
ಪ್ರೇಮವನ್ನು ಅತ್ಯಂತ ಸರಳ ಪದಗಳಿಂದ ವ್ಯಕ್ತಪಡಿಸುವ ಇವರ ಕವನಗಳು ಓದುಗರಿರಲಿ, ಭಾವಗೀತೆ ಹಾಡುವವರ ಮೂಲಕ ಓದು ಬಾರದವರನ್ನು ಸಹ ತಲುಪಿಬಿಟ್ಟಿತು.
ಪ್ರೇಮ ಎಂಬ ಕವನದಲ್ಲಿ ಇವರು ಬರೆದ ಸಾಲುಗಳು, ಪ್ರೇಮದ ಕುರಿತಾಗಿ ನೀವೇ ಓದಿ:
ನಿಜದ ಸಂತಸದಲ್ಲಿ ಬಿರಿದ ಮಲ್ಲಿಗೆಯಿಂದ
ಬರುವ ಕಂಪಿನ ಹೆಸರು ಪ್ರೇಮವೆಂದು ;
ನೀಲಾಂತರಿಕ್ಷದಲಿ ಹೊಳೆವ ನಕ್ಷತ್ರಗಳ
ಕಣ್ಣ ಸನ್ನೆಯ ಹೆಸರು ಪ್ರೇಮವೆಂದು.
ಇವರ ಕವನಗಳಲ್ಲಿ ನಮಗೆ ಮಲ್ಲಿಗೆ ಮತ್ತು ಪ್ರೀತಿಯಂತೆ ನಮಗೆ ಹಿಡಿಸುವುದು, ಅದರಲ್ಲಿನ ನೋವು ಮತ್ತು ಮಧ್ಯಮ ವರ್ಗದ ಜನರ ನೋವು. ಉದಾಹರಣೆಗೆ ‘ಮನೆಯಿಂದ ಮನೆಗೆ’ ಕವನದ ಈ ಸಾಲುಗಳು:
ನಗುವ ಮುಖಗಳ ನೋಡಿಬಂದೆನು
ಹಾದಿ ಬೀದಿಯ ಕೆಲದಲಿ ;
ನಗದ ಒಂದೇ ಮುಖವ ಕಂಡೆನು
ನನ್ನ ಮನೆಯಂಗಳದಲಿ.
ಮತ್ತೊಂದು ಉದಾಹರಣೆ ‘ಅಕ್ಕಿಯಾರಿಸುವಾಗ’ ಕವನ ಸಂಕಲನದಿಂದ:
ಅಕ್ಕಿ ಆರಿಸುವಾಗ ಚಿಕ್ಕ ನುಚ್ಚಿನ ನಡುವೆ..ಬಂಗಾರವಿಲ್ಲದಾ ಬೆರಳು..
ತಗ್ಗಿರುವ ಕೊರಳಿನಾ ಸುತ್ತ ಕರಿಮಣಿ ಒಂದೆ, ಸಿಂಗಾರ ಕಾಣದಾ ಹೆರಳು..
ಮಹಿಳೆಯರ ಭಾವನೆಗಳ ಕುರಿತಾಗಿ ಇವರು ಅತ್ಯಂತ ಕಡಿಮೆ ಪದಗಳಲ್ಲಿಯೇ ಸಂಪೂರ್ಣ ಚಿತ್ರಣ ಕಟ್ಟಿಕೊಡುವ ಮಟ್ಟಿಗಿನ ದಿಗ್ಗಜರಾಗಿದ್ದರು. “ಮನೆಗೆ ಬಂದ ಹೆಣ್ಣು” ಎಂಬ ಈ ಕೆಳಗಿನ ಸಣ್ಣ ಪದ್ಯವನ್ನು ನೋಡಿ, ಮದುವೆಯಾಗಿ ಮನೆಗೆ ಬಂದ ನವ ವಧು ಹೇಗೆ ಮೂರು ದಿನದಲ್ಲಿ ಬದಲಾದಳು ಎಂದು ಎಷ್ಟು ಸರಳವಾಗಿ ವಿವರಿಸಿದ್ದಾರೆ ಎಂದು.
ಮೊದಲ ದಿನ ಮೌನ ಅಳುವೇ ತುಟಿಗೆ ಬಂದತೆ,
ಚಿಂತೆ, ಬಿಡಿಹೂವ ಮುಡಿದಂತೆ ;
ಹತ್ತು ಕಡೆ ಕಣ್ಣು ಸಣ್ಣಗೆ ದೀಪ ಉರಿದಂತೆ ;
ಜೀವನದಲಿ ಜಾತ್ರೆ ಮುಗಿದಂತೆ.
ಎರಡನೆಯ ಹಗಲು ಇಳಿಮುಖವಿಲ್ಲ, ಇಷ್ಟು ನಗು –
ಮೂಗುತಿಯ ಮಿಂಚು ಒಳಹೊರಗೆ ;
ನೀರೊಳಗೆ ವೀಣೆ ಮಿಡಿದಂತೆ ಆಡಿದ ಮಾತು,
ಬೇಲಿಯಲಿ ಹಾವು ಹರಿದಂತೆ.
ಮೂರನೆಯ ಸಂಜೆ ಹೆರಳಿನ ತುಂಬ ದಂಡೆಹೂ,
ಹೂವಿಗೂ ಜೀವ ಬಂದಂತೆ ;
ಸಂಜೆಯಲಿ ರಾತ್ರಿ ಇಳಿದಂತೆ, ಬಿರುಬಾನಿಗೂ
ಹುಣ್ಣಿಮೆಯ ಹಾಲು ಹರಿದಂತೆ !
ಪ್ರೇಮ ಪತ್ರಗಳ ಪಾಲಿಗೆ ಕೆ.ಎಸ್.ನರವರು ಒಂದು ಕಾಲದಲ್ಲಿ ಸ್ಫೂರ್ತಿಯ ಚಿಲುಮೆಯಾಗಿದ್ದರು. ಆ ಪತ್ರಗಳಲ್ಲಿ ಇವರ ಕವನದ ಸಾಲುಗಳನ್ನು ಹಕ್ಕುಸ್ವಾಮ್ಯದ ಕುರಿತು ತಲೆಕೆಡಿಸಿಕೊಳ್ಳದೆ ಬಳಸಿಕೊಳ್ಳುತ್ತಿದ್ದವರು ಲಕ್ಷಾಂತರ ಜನರಿದ್ದರು. ಅಂತಹ ಒಂದು ಸಣ್ಣ ಪದ್ಯದ ಉದಾಹರಣೆಯನ್ನು ನೀವೇ ಓದಿ, ಕವನದ ಶೀರ್ಷಿಕೆ ‘ಒಳಗೆ ಬಾರೆನ್ನೊಲವೆ’:
ಕದವ ತಟ್ಟದೆ, ನೇರ ಒಳಗೆ ಬಾರೆನ್ನೊಲವೆ ;
ತೆರೆದ ಬಾಗಿಲು ನಾನು ನಿನ್ನ ದನಿಗೆ.
ಹೊಂಬಿಸಿಲು ಬರುವಂತೆ ತೆರೆದ ಬಾಗಿಲಿನೊಳಗೆ
ಬಂದು ಬಿಡು ಕಾದಿರುವ ನಿನ್ನ ಮನೆಗೆ.
ಹಾಗೆಂದು ಇವರು ಕೇವಲ ಇಂತಹ ಪ್ರೀತಿ, ಪ್ರೇಮ, ಬಡತನ ಮುಂತಾದ ವಿಷಯದ ಕುರಿತಾಗಿಯೇ ಬರೆದಿಲ್ಲ. ನಾಡು-ನುಡಿಯ ಕುರಿತಾಗಿ, ಪ್ರಕೃತಿಯ ಕುರಿತಾಗಿ, ನಗು ಉಕ್ಕಿಸುವಂತಹ ವಿಷಯಗಳ ಕುರಿತಾಗಿ ಮತ್ತು ಕೆಲವೊಂದು ಇತರೆ ಭಾಷೆಗಳ ಅನುವಾದವನ್ನು ಸಹ ಮಾಡಿದ್ದಾರೆ. ಇವರ “ಹಿಂದಿನ ಸಾಲಿನ ಹುಡುಗರು” ಕವನದ ಈ ಸಾಲುಗಳನ್ನು ಓದಿ, ಇವರಲ್ಲಿನ ಹಾಸ್ಯ ಪ್ರಜ್ಞೆಯ ಕುರಿತಾಗಿ ನಿಮಗೇ ತಿಳಿಯುತ್ತದೆ.
ಜೊತೆಯಲಿ ಕೂರುವ ತಮ್ಮ ತಂಗಿಯರ
ಓದುಬರಾವನು ನೋಯಿಸೆವು
ನಮ್ಮಂತಾಗದೆ ಅವರೀ ಶಾಲೆಯ
ಬಾವುಟವೇರಿಸಲೆನ್ನುವೆವು.
ಪಂಪ ಕುಮಾರವ್ಯಾಸರ ದಾಸರ
ಹರಿಹರ ಶರಣರ ಕುಲ ನಾವು!
ಕನ್ನಡದಲ್ಲೇ ತೇರ್ಗಡೆಯಾಗದ
ಪಂಡಿತಪುತ್ರರ ಪಡೆ ನಾವು!
ಗೆದ್ದವರೆಲ್ಲಾ ನಮ್ಮವರೇ ಸರಿ:
ಗೆಲ್ಲುವಾತುರವೇ ನಮಗಿಲ್ಲ.
ಸೋತವರಿಗೆ ನಾವಿಲ್ಲವೆ ಮಾದರಿ?
ಕೆರೆಗೆ ಬೀಳುವುದು ತರವಲ್ಲ.
ಸೋತವರಿಗೆ ನಾವಿಲ್ಲವೆ ಮಾದರಿ
ಕೆರೆಗೆ ಬೀಳುವುದು ತರವಲ್ಲ.
ಹಾಸ್ಯ ಪ್ರಜ್ಞೆಯ ಕುರಿತಾಗಿ ಈ ಮೇಲಿನ ಕವನವನ್ನು ಉದಾಹರಣೆಯಾಗಿ ನೀಡಿದೆವು. ಇವರು ವಿರಹ, ಪ್ರೇಮ ಎಲ್ಲವನ್ನೂ ತಿಳಿಹಾಸ್ಯದಿಂದ ವಿವರಿಸಬಲ್ಲವರಾಗಿದ್ದರು. ಇವರ ತಿಳಿ ಹಾಸ್ಯವೇ ಇವರನ್ನು “ಮನೆ ಮನಗಳ ಕವಿ”ಯಾಗಿಸಿತು ಎಂದರೆ ತಪ್ಪಾಗಲಾರದು. ಅದರ ಒಂದು ಉದಾಹರಣೆಯನ್ನು ಇಲ್ಲಿ ನೋಡೋಣ:
ಮೂರು ತಿಂಗಳು ಕಳೆದ ಮಾರನೆಯ ದಿವಸವೇ
ಬರುವೆನೆಂದಾಣೆಯಿಟ್ಟೊಲವ ಮಿಡಿದು,
ತೌರಿಗೊಡಿದ ಗೌರಿ ಮೂರು ತಿಂಗಳ ಮೇಲೆ
ವಾರವೊಂದಾದರೂ ಬಂದಿಲ್ಲವು..!
ಜನ ಸಾಮಾನ್ಯ ಪಾತ್ರಗಳನ್ನು ಸೃಷ್ಟಿಸಿ ಅವರಿಂದ ತಮ್ಮ ಕವನದ ಆಶಯಗಳನ್ನು ಸೃಷ್ಟಿಸುವ ಇವರ ಸೃಜನಶೀಲತೆ ಇವರ ಕವನಗಳ ಹೆಚ್ಚುಗಾರಿಕೆಗಳಲ್ಲಿ ಒಂದಾಗಿದೆ. ಉದಾಹರಣೆಗೆ “ಬಳೆಗಾರನ ಹಾಡು” ಕವನದ ಈ ಸಾಲುಗಳು:
ಮುನಿಸು ಮಾವನ ಮೇಲೆ; ಮಗಳೇನ ಮಾಡಿಹಳು?
ನಿಮಗೆತಕೀ ಕಲ್ಲು ಮನಸ್ಸು?
ಹೋಗಿ ಬನ್ನಿರಿ, ಒಮ್ಮೆ ಕೈ ಮುಗಿದು ಬೇಡುವೆನು
ಅಮ್ಮನಿಗೆ ನಿಮ್ಮದೇ ಕನಸು
ಹೆಂಡತಿಯನ್ನೇ ಕವನದ ವಸ್ತುವಾಗಿ ಚಿತ್ರಿಸಿದ ಕವಿಗಳಲ್ಲಿ, ಇವರ ದಾಖಲೆಯನ್ನು ಯಾರು ಮುರಿಯಲಾರರು ಎಂದೇ ಹೇಳಬಹುದು. ಕೆಲವೊಂದು ಉದಾಹರಣೆಗಳನ್ನು ನೀವೇ ಓದಿ ನೋಡಿ:
ಬಾರೆ ನನ್ನ ಶಾರದೆ! ಕವನದ ಸಾಲುಗಳು-
ಮದುವೆಯಾಗಿ ತಿಂಗಳಿಲ್ಲ ನೋಡಿರಣ್ಣ ಹೇಗಿದೆ!
ನಾನು ಕೂಗಿದಾಗಲೆಲ್ಲ ಬರುವಳೆನ್ನ ಶಾರದೆ!
ಹಿಂದೆ ಮುಂದೆ ನೋಡದೆ, ಎದುರು ಮಾತನಾಡದೆ!
‘ಒಬ್ಬಳೇ ಮಗಳು’ ಕವನದ ಈ ಸಾಲುಗಳನ್ನು ಸಹ ಓದಿ:
ಒಬ್ಬಳೇ ಮಗಳೆಂದು ನೀವೇಕೆ ಕೊರಗುವಿರಿ?
ಒಬ್ಬಳೇ ಮಡದಿಯೆನಗೆ!
ಹಬ್ಬದೂಟದ ನಡುವೆ ಕಣ್ಣೀರ ಸುರಿಸದಿರಿ…
ಸುಮ್ಮನಿರಿ ಮಾವನವರೆ
‘ಹೆಂಡತಿಯ ಕಾಗದ’ – ಕವನದಿಂದ ಈ ಸಾಲುಗಳಲ್ಲಿ ನೋಡಿ, ಅವರ ಪ್ರೀತಿಯ ವೇಗವನ್ನು:
ಚಿತ್ರದುರ್ಗದ ರೈಲು ನಿತ್ಯವೂ ಓಡೋಡಿ
ಮೈಸೂರ ಸೇರುವುದು ನಾನು ಬಲ್ಲೆ
ನಾಳೆ ಮಂಗಳವಾರ; ಮಾರನೆಯ ದಿನ ನವಮಿ
ಆಮೇಲೆ ನಿಲ್ಲುವೇನೆ ನಾನು ಇಲ್ಲೇ?
ಇನ್ನು ಅವರ ಸುಪ್ರಸಿದ್ಧ “ಹೆಂಡತಿಯೊಬ್ಬಳು” ಕವನವನ್ನು ಕರ್ನಾಟಕದ ಎಷ್ಟು ಜನ ಪತಿದೇವರುಗಳು ಹಾಡಿಕೊಂಡಿರುವುದಿಲ್ಲ ನೀವೇ ಹೇಳಿ:
ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದೆ ಕೋಟಿ ರೂಪಾಯಿ!
ಹೆಂಡತಿಯೊಬ್ಬಳು ಹತ್ತಿರವಿದ್ದರೆ…ನಾನೂ ಒಬ್ಬ ಸಿಪಾಯಿ!
ಇವರ ಕವನಗಳ ಕುರಿತು ಉಪಸಂಹಾರ ಬರೆಯಲು ಆಗುವುದಿಲ್ಲ. ಏಕೆಂದರೆ ಬರೆಯುವ ನಮ್ಮ ಕವಿ ಇಂದು ನಮ್ಮೊಡನಿಲ್ಲ, ಆದರೆ ಅವರು ಬರೆದ ಕವನಗಳಿಗೆ ಸಾವಿಲ್ಲವಲ್ಲವೇ? ಕೇಳುವ, ಓದುವ ನಾವು ಎಂದಿಗೂ ಎಂದೆಂದಿಗೂ ಅವರನ್ನು ನೆನೆಯುತ್ತಲೇ ಇರುತ್ತೇವೆ. ನಮ್ಮ ಮನಸ್ಸಿನ ಮಾತುಗಳಿಗೆ, ಭಾವಗಳಿಗೆ ನಾವು ಹುಟ್ಟುವ ಮೊದಲೇ ಕವನದ ರೂಪವನ್ನು ಕೊಟ್ಟ ನಮ್ಮ ಕೆ.ಎಸ್.ನರವರ ಪ್ರತಿಭೆಗೆ ಶಿರಸಾಷ್ಟಾಂಗ ನಮಸ್ಕರಿಸುತ್ತಾ ನನ್ನ ಈ ನೆನಪಿನ ಯಾನಕ್ಕೆ ವಿರಾಮ ನೀಡುತ್ತಿದ್ದೇನೆ. ಅವರದೆ ಪದ್ಯದ ಸಾಲುಗಳಿಂದ.
ಎಲ್ಲಿತ್ತೊ ಒಂದು ದನಿ,
ಎಲ್ಲಿತ್ತೊ ಒಂದು ಬನಿ,
ನಿನ್ನಿಂದ ಹಾಡಾಯ್ತು
ಅಮೃತವಾಯ್ತು.
(ಬನಿ= (ದೇ) ೧ ಸಾರ, ಸತ್ತ್ವ ೨ (ಹಾಲು, ಮೊಸರು, ಕಲಸಿದ ಹಿಟ್ಟು ಮುಂ.ವುಗಳಲ್ಲಿರುವ) ಜಿಗುಟು ಅಂಟು ೩ ಕಳೆ, ತೇಜಸ್ಸು ೪ ಒಂದು ಬಗೆಯ ತೆರಿಗೆ)
March 28, 2018 — magnon